1 Nov 2021 | 1 min Read
Medically reviewed by
Author | Articles
ಹೆಣ್ಣಿಗೆ ತನ್ನ ಬದುಕಿನ ಮುಖ್ಯ ಮೈಲಿಗಲ್ಲು ತಾಯ್ತನ. ಈ ಸಮಯದಲ್ಲಿ ಬಹಳಷ್ಟು ಕನಸ್ಸು ಕಾಣುತ್ತಾ ಸಂಭ್ರಮಿಸುವ ಅವಳು, ಮಗು ಜನಿಸಿದ ಮೇಲೆ ಬಹಳಷ್ಟು ಕನಸುಗಳನ್ನು ಹೊತ್ತು ಸಾಗುತ್ತಾಳೆ. ನಿತ್ಯ ಮಗುವಿನ ಚಟುವಟಿಕೆಗಳನ್ನು ನೋಡಿ ಸಂಭ್ರಮಿಸುತ್ತಾಳೆ. ದಿನಕಳೆದಂತೆ ಮಗುವಿನ ಅಂದವನ್ನು ಸವಿಯುತ್ತಾ ಮಗು ಇನ್ನಷ್ಟು ಸುಂದರವಾಗಿ ಕಾಣಿಸಬೇಕೆಂದು ಪರಿತಪಿಸುತ್ತಾಳೆ . ಇದಕ್ಕಾಗಿ ಹಲವಾರು ಬ್ಲಾಗ್, ಆಪ್ , ಜಾಹಿರಾತಿನ ಮೊರೆ ಹೋಗುತ್ತಾಳೆ. ತನ್ನ ಮಗುವಿನ ಸೌಂದರ್ಯಕ್ಕೆ ವಿವಿಧ ಬಗೆಯ ಆಯ್ಲ್ ಗಳನ್ನು ಆಯ್ಕೆ ಮಾಡುತ್ತಾಳೆ. ಮಗುವಿನ ನಾಜೂಕಾದ ಶರೀಕಕ್ಕೆ ತೊಂದರೆಯಾದರೆ ಮುಂದೇನು ಎಂಬ ಪ್ರಶ್ನೆ ಪ್ರತೀ ತಾಯಿಯನ್ನು ಕಾಡದಿರದು.
ನವಜಾತ ಶಿಶುವಿನ ಚರ್ಮ ತುಂಬಾ ನಾಜೂಕಾಗಿರುತ್ತದೆ. ಮೃದುವಾಗಿರುವ ಮಗುವಿನ ಚರ್ಮ ಹೆಚ್ಚು ಬಿಳುಪಾಗಿ ಮತ್ತು ಪಾರದರ್ಶಕದ ಹಾಗಿರುತ್ತದೆ. ಮಗುವಿನ ಸೂಕ್ಷ್ಮ ರಕ್ತನಾಳಗಳು ತೆಳುವಾದ ಚರ್ಮದ ಮೇಲ್ಪದರದಲ್ಲಿ ಹೆಚ್ಚು ಕೆಂಪಾಗಿ ಕಾಣುವಂತೆ ಮಾಡುತ್ತದೆ. ಇದರಿಂದ ಮಗುವಿನ ಚರ್ಮದ ಬಣ್ಣ ತುಂಬಾ ತೆಳುವಾಗಿ ನಮಗೆ ಕಾಣುತ್ತದೆ. ಅದೇ ರೀತಿಯಲ್ಲಿ ನವಮಾಸ ಕಳೆದು ಹೊಸಜಗತ್ತಿಗೆ ಕಾಲಿಡುವ ಮಗು, ತಾಯಿಯ ಜನನಾಂಗದ ಮೂಲಕ ಅಥವಾ ವಾಕ್ಯೂಮ್ ಒತ್ತಡದಿಂದ ಹೊರ ಬಂದಾಗ ಅದರ ತಲೆಯ ಆಕಾರ ಬದಲಾಗಿರುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಮಗುವಿನ ರೂಪ ನಾವಂದುಕೊಂಡಂತೆ ಇರುವುದಿಲ್ಲ. ಮಗು ಒಂದು ರೂಪಕ್ಕೆ ಬರಬೇಕೆಂದರೆ, ಉತ್ತಮ ರೀತಿಯ ಆರೈಕೆ ಮುಖ್ಯವಾಗಿರುತ್ತದೆ. ಮಗುವಿನ ಅಂಗಾಂಗಗಳು ಪುಷ್ಟಿಗೊಂಡು ದೃಢವಾಗಿ ಬೆಳೆಯಬೇಕೆಂದರೆ ಮಗುವಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಆರೈಕೆ ಮಾಡಬೇಕು. ಹಿಂದಿನಿಂದಲೂ ಹರಿದುಬಂದ ಮಗುವಿನ ಆರೈಕೆಯ ಪ್ರಮುಖ ಭಾಗ ತೈಲ (ಎಣ್ಣೆ) ಮಸಾಜ್ ಮಾಡುವುದು. ಇದು ಮಗುವಿಗೆ ತುಂಬಾ ಮುಖ್ಯ.
ನವಜಾತ ಶಿಶು ಜನಿಸಿದ ತಕ್ಷಣ ಅದರ ಚರ್ಮ ಒಣಗಿದಂತೆ ಇರುತ್ತದೆ. ಈ ಮೊದಲೇ ಹೇಳಿದಂತೆ ತಲೆಯು ಆಕಾರಗೆಟ್ಟಿರುತ್ತದೆ. ಮುಖದ ಆಕಾರವಾಗಲಿ, ಕೈ ಕಾಲುಗಳಿಗೆ ಶಕ್ತಿಯಾಗಲಿ ಇರುವುದಿಲ್ಲ. ಸೊಂಟದಲ್ಲಿ ಶಕ್ತಿ ಇರುವುದಿಲ್ಲ. ತಾಯಿಯ ಗರ್ಭದಲ್ಲಿ ಮುದುಡಿ ಮಲಗಿದ್ದ ಮಗು, ಹೊರ ಜಗತ್ತಿಗೆ ಬಂದ ನಂತರವೂ ಅದೇ ಭಂಗಿಗೆ ಹೊಂದಿಕೊಂಡಿರುತ್ತದೆ. ಮಗುವಿನ ಕೈ ಕಾಲುಗಳಿಗೆ, ದೇಹದ ರಕ್ತ ಸಂಚಾರಕ್ಕೆ ನಿತ್ಯ ವ್ಯಾಯಾಮದಂತೆ ತೈಲದಿಂದ ಮಾಸಾಜ್ ಮಾಡಲಾಗುವುದು ಒಂದು ರೀತಿಯಲ್ಲಿ ಮಗುವಿನ ನಿತ್ಯ ಕೆಲಸದಂತೆ. ಕೆಲವು ಕಡೆ ಸಾಂಪ್ರದಾಯಿಕ ವಿಧಾನದಲ್ಲಿ ಮಗುವಿನ ಆರೈಕೆ ನಡೆಯುತ್ತದೆ. ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುವವರು ಅದೇ ರೀತಿ ಅನುಸರಿಸಬಹುದು. ಮಗು ಸದೃಢವಾಗಿ ಬೆಳೆಯಲು ಮಗು ಜನಿಸಿದ ಕೆಲವು ದಿನಗಳ ನಂತರ ನಿರಂತರ ಎಣೆಯನ್ನು ಮೈಗೆ ಪೂಸಿ ಸ್ನಾನ ಮಾಡಿಸುವುದು ಒಳ್ಳೆಯದು. ಹೀಗೆ ಅನುಸರಿಸುವುದರಂದ ಮಗುವಿನ ಬೆಳವಣಿಗೆಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದರೆ ತಪ್ಪಾಗಲಾರದು.
ಬೆಳೆಯುವ ಮಗುವಿಗೆ ಎಣ್ಣೆಯಿಂದ ದೇಹಕ್ಕೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಮಗುವಿಗೂ ಇಷ್ಟ ಎನಿಸುತ್ತದೆ. ನಮ್ಮ ಸ್ಪರ್ಶ ಮಗುವಿಗೆ ಸಿಗುವುದರಿಂದ ಮಗು ನಮ್ಮನ್ನು ಗುರುತು ಹಿಡಿದು ನಮ್ಮ ಪ್ರತಿಕ್ರಿಯೆಗೆ ಸ್ಪಂದಿಸುತ್ತದೆ. ಹಾಗಾದರೆ ತೈಲ ಅಭ್ಯಂಜನದಿಂದ ಮಗುವಿಗಾಗುವ ಲಾಭವನ್ನು ತಿಳಿಯೋಣ.
ಮಸಾಜ್ ಮಾಡುವ ವಿಧಾನ
ಕಾಲು ಮತ್ತು ಪಾದಗಳ ಮಸ್ಸಾಜ್ : ಹಾಸಿಗೆಯ ಮೇಲೆ ರಬ್ಬರಿನ ಹಾಳೆಯನ್ನು ಹಾಸಿ ಅದರ ಮೇಲೆ ತೆಳು ಬಟ್ಟೆಯ ಮೇಲೆ ಮಗುವನ್ನು ಮಲಗಿಸಿ. ನಂತರ ಮಗುವಿಗೆ ಒಗ್ಗುವ ಶುದ್ಧ ಎಣ್ಣೆಯನ್ನು ಎರಡು ಕೈಯ ಬೆರಳಲ್ಲಿ ಅದ್ದಿಕೊಂಡು ನಿಧಾನವಾಗಿ ಮಗುವಿನ ಕಾಲಿನ ಭಾಗಕ್ಕೆ ಹಚ್ಚಿರಿ. ಕಾಲಿನ ಪಾದವನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಿಂದ ತೊಡೆಯಿಂದ ಕಾಲಿನ ಮಂಡಿಯವರೆಗೆ ಎಳೆಯಿರಿ. ಮತ್ತೆ ಮಂಡಿಯಿಂದ ಕಾಲು ಬೆರಳುಗಳವರೆಗೆ ನಿಧಾನಕ್ಕೆ ಎಳೆಯಿರಿ. ಹೀಗೆ ಪುನಾರಾವರ್ತಿಸಿ.
ತಲೆಯ ಭಾಗಕ್ಕೆ: ಎರಡು ಕೈಗಳಿಂದ ಎಣ್ಣೆಯನ್ನು ಅದ್ದಿಕೊಂಡು, ಮಗುವಿನ ತಲೆಯ ಮಧ್ಯವಾಗಕ್ಕೆ ಮೊದಲು ಎಣ್ಣೆಯನ್ನು ಹಚ್ಚಿರಿ. ವೃತ್ತಾಕಾರದ ಚಿತ್ರವನ್ನು ಮಗುವಿನ ತಲೆಯಲ್ಲಿ ಬರೆಯುವ ಹಾಗೆ ಬೆರಳಿನಿಂದ ನಿಧಾನಕ್ಕೆ ತಲೆಯ ಮೇಲೆ ಬಿಡಿಸಿರಿ. ಇದರಿಂದ ತಲೆಯ ಕೂದಲಿನ ಬುಡಕ್ಕೆ ರಕ್ತ ಸಂಚಾರ ಸಮರ್ಪಕವಾಗಿ ಆಗುವುದಲ್ಲದೇ ಮಗುವಿನ ಮಿದುಳಿನ ಬೆಳವಣಿಗೆಗೆ ಸಹಕಾರಿ. ಮಗುವಿಗೆ ಬಹು ಬೇಗನೆ ನಿದ್ರೆ ಆವರಿಸುವುದು.
ಮುಖ: ಮಗುವಿನ ಮುಖದ ಭಾಗವನ್ನು ಮಸಾಜ್ ಮಾಡುವಾಗ ಹೆಚ್ಚು ನಿಗಾವಹಿಸಿ ಮಾಡಬೇಕು. ಹಣೆಯನ್ನು ಬೆರಳುಗಳಿಂದ ಹೊರಗೆ ದೂಡುವಂತೆ ಒತ್ತಿ ಮಸಾಜ್ ಮಾಡಬೇಕು. ಮೂಗನ್ನು ನೀವಿ ಎಳೆದು, ಮೇಲ್ತುಟಿಯನ್ನು ಎರಡು ಕಡೆಗೆ ಉಜ್ಜಬೇಕು. ಅದೇ ರೀತಿ ಕೆನ್ನೆಯನ್ನು ಉಜ್ಜುವಾಗಲೂ ನಿಧಾನಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು. ಮೂಗನ್ನು ನೇರವಾಗಿ ಎಳೆಯಬೇಕು
ಎದೆಯ ಭಾಗ : ಮಗುವಿಗೆ ಬಹುಬೇಗ ಶೀತ ಆಗಿ ಎದೆಯಲ್ಲಿ ಕಫ ಕಟ್ಟುವುದರಿಂದ , ಎದೆಯ ಭಾಗವನ್ನು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಬೇಕು. ಎರಡು ಕೈಗಳಿಗೆ ಎಣ್ಣೆಯನ್ನು ಮೊದಲು ಅದ್ದಿಕೊಳ್ಳಿ. ಎದೆಯ ಮಧ್ಯ ಭಾಗದಿಂದ ವಿಶಾಲವಾಗಿ ನಿಮ್ಮ ಕೈಗಳನ್ನು ಹರಡಿರಿ. ಹೀಗೆ ಪುನರಾವರ್ತಿಸಿರಿ. ಮಗುವಿಗೆ ಹಿತವೆನಿಸುತ್ತದೆ.
ಹೊಟ್ಟೆಯ ಭಾಗ: ಕೈಯ ಬೆರಳಿನ ಸಹಾಯದಿಂದ ಮಗುವಿನ ಹೊಕ್ಕಳಿನ ಕೆಳಕ್ಕೆ ಆಂಟಿ ಕ್ಲಾಕ್ ರೀತಿಯಲ್ಲಿ ಕೈ ಬೆರಳನ್ನು ನಡೆದಾಡುವ ಹಾಗೆ ಚಲಿಸಿರಿ. ಮಗುವಿನ ಜೀರ್ಣಾಂಗವನ್ನು ಉತ್ತೇಜಿಸುವುದು ಮಾತ್ರವಲ್ಲದೇ ಮಗುವು ಗ್ಯಾಸ್ ಸಮಸ್ಯೆಯಿಂದ ಮುಕ್ತವಾಗುವುದು. ನಂತರ ನಿಧಾನಕ್ಕೆ ಕೈ ಬೆರಳಿನಿಂದ ಹೊಕ್ಕಳಿನಿಂದ ಮೇಲಕ್ಕೆ ಮಸಾಜ್ ಮಾಡಿರಿ.
ಬೆನ್ನು: ಮಗುವನ್ನು ಹೊಟ್ಟೆಯ ಮೇಲೆ ಮಲಗಿಸಿ ನಿಧಾನಕ್ಕೆ ತಲೆಯ ಭಾಗದಿಂದ ಕೆಳಗಿನವರೆಗೆ ಬೆನ್ನಿಗೆ ಮಸಾಜ್ ಮಾಡಿರಿ.
ಮಸಾಜ್ ಎಣ್ಣೆಯ ಆಯ್ಕೆ :
ಇಂದು ಮಾರುಕಟ್ಟೆಯಲ್ಲಿ ಬಹಳಷ್ಟು ಮಗುವಿಗೆ ಮಸಾಜ್ ತೈಲಗಳು ಲಭ್ಯವಿದೆ. ಅದರಲ್ಲಿ ಉತ್ತಮವಾದದನ್ನು ಮಗುವಿನ ತಾಯಿ ಆಯ್ಕೆ ಮಾಡಿಕೊಳ್ಳಬೇಕು. ಕಳಪೆ ಗುಣಮಟ್ಟದ ಎಣ್ಣೆಗಳು, ಅಲರ್ಜಿ ಕಾರಕ ಎಣ್ಣೆಯ ಬಗ್ಗೆ ಹೆಚ್ಚು ಜಾಗ್ರತೆಯನ್ನುವಹಿಸಿರಿ. ಮಗುವಿನ ದೇಹಕ್ಕೆ ಹಚ್ಚುವ ಮೊದಲು ಮಗುವಿನ ಕೈಯ ಮೇಲೆ ಹಚ್ಚಿ ನೋಡಿರಿ. ಸ್ವಲ್ಪ ಹೊತ್ತು ಪರೀಕ್ಷಿಸಿದ ನಂತರ ಎಣ್ಣೆಯನ್ನು ಉಪಯೋಗಿಸಿ.
ಒಟ್ಟಾರೆಯಾಗಿ ಮಗುವಿನ ದೈಹಿಕ ಬೆಳವಣಿಗೆಯಲ್ಲಿ ತೈಲ ಅಭ್ಯಂಜನ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಗುವಿಗೆ ಪೌಷ್ಟಿದಾಯಕ ಆಹಾರದ ಮೇಲೆ ಹೇಗೆ ನಾವು ಸಂಪೂರ್ಣ ನಿಗಾವಹಿಸಿ ಆಯ್ಕೆ ಮಾಡುತ್ತೀವೋ ಅದೇ ರೀತಿಯಲ್ಲಿ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತೈಲ ಮಸಾಜಿಗೆ ತೈಲದ ಆಯ್ಕೆ ಕೂಡ ತುಂಬಾ ಮುಖ್ಯ. ಆರೋಗ್ಯ ಪೂರ್ಣ ಮಸಾಜ್ ನಿಮ್ಮ ಮತ್ತು ನಿಮ್ಮ ಮಗುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.
A