ಮಗುವಿನೊಂದಿಗೆ ಆಡಿ ನಲಿದಾಡಿ !

cover-image
ಮಗುವಿನೊಂದಿಗೆ ಆಡಿ ನಲಿದಾಡಿ !

ಮನೆಯೇ ಮಗುವಿನ ಮೊದಲ ಪಾಠಶಾಲೆ. ಮಗುವು ಆರಂಭದ ಬೆಳವಣಿಗೆಯಲ್ಲಿ ತನ್ನ ಪೋಷಕರನ್ನು ಅನುಕರಿಸುತ್ತದೆ. ತಂದೆ-ತಾಯಿಯೇ ತನ್ನ ಪ್ರಪಂಚ ಎಂದುಕೊಂಡಿರುತ್ತದೆ. ಎಲ್ಲಾ ಮಗುವಿಗೆ ನನ್ನ ತಂದೆ-ತಾಯಿ ತನ್ನ ಜೊತೆಯಲ್ಲಿ ಆಟವಾಡಬೇಕು, ಹೆಚ್ಚು ಸಮಯ ಕಳೆಯಬೇಕು, ಕೈ ಹಿಡಿದು ಹೊರಗೆಲ್ಲಾ ಸುತ್ತಾಡಿಸಬೇಕು, ತನ್ನನ್ನು ಹೆಚ್ಚು ಮುದ್ದು ಮಾಡಬೇಕು ಎಂಬ ಬಯಕೆ ಇರುತ್ತದೆ. ಮಗುವಿನ ಬೆಳವಣಿಗೆಯ ಒಂದು ಭಾಗ ಆಟ-ನಲಿದಾಟ. ಸದಾ ತನ್ನ ಜೊತೆಯಲ್ಲಿರುವ ತಂದೆ-ತಾಯಿಯನ್ನು ಮಗು ಸದಾ ಅವಲಂಭಿಸಿರುತ್ತದೆ. ಗೆಳೆಯರು ಎಂದು ಗುರುತಿಸುವ ಮೊದಲು ಮಗು ತನ್ನ ತಂದೆ-ತಾಯಿಯನ್ನು ಗೆಳೆಯರಂತೆ ಭಾವಿಸುತ್ತದೆ. ಬೆಳೆಯುವ ಮಗುವಿಗೆ ತಂದೆ ಹೀರೋ ಇದ್ದಂತೆ. ಅದೇ ರೀತಿ ತಾಯಿ ಕೂಡ ತನ್ನ ಪ್ರಪಂಚ ಎಂದು ಭಾವಿಸುತ್ತದೆ. ತಂದೆ-ತಾಯಿ ಮಗುವಿಗೆ ಆತ್ಮೀಯರಂತೆ ಕಾಣುತ್ತದೆ. ಒಂದು ನಿಟ್ಟಿನಲ್ಲಿ ಹೇಳಬೇಕೆಂದರೆ ಪೋಷಕರೇ ಮಗುವಿಗೆ ಮೊದಲ ಸ್ನೇಹಿತರು. ಮಗು ಮುಕ್ತವಾಗಿ ಬೆರೆತು ಆಟವಾಡುತ್ತಾ, ಓಡಾಡುತ್ತಾ ಇರಬೇಕೆಂದರೆ ಮಗುವಿನೊಂದಿಗೆ ತಂದೆ-ತಾಯಿಯರು ಮಗುವಾಗಬೇಕು. ‘ಸಣ್ಣ ಮಗುವಿನ ಜೊತೆಗೆ ನಮಗೆಂತ ಆಟ?’ ಎಂದು ನೀವು ಮನಸಿನಲ್ಲಿ ಅಂದುಕೊಳ್ಳುತ್ತೀರಿ ಅಲ್ಲವೇ? ಅಥವಾ ಮಗು ನಿಮ್ಮನ್ನು ಆಟಕ್ಕೆ ಕರೆಯುವಾಗ ನಿಮಗೆ ಆಸಕ್ತಿ ಇರುವುದಿಲ್ಲ. ಮಗುವನ್ನು ಬೈದು ಒಬ್ಬನೇ ಆಡುವಂತೆ ಪ್ರೇರೇಪಿಸುತ್ತೀರಿ ಅಲ್ಲವೇ ? ಹಾಗೊಂದು ವೇಳೆ ನೀವು ಹೀಗೆ ಮಾತಾಡಿ ಕಳುಹಿಸಿದರೆ , ಮಗುವಿನ ಬೆಳವಣಿಗೆಗೆ ದೊಡ್ಡ ಕೊಡಲಿಪೆಟ್ಟು ಬಿದ್ದಂತೆ. ಮಗುವಿನ ಬೆಳವಣಿಗೆಯಲ್ಲಿ ಪೋಷಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂಬುದು ನಿಮಗೆ ತಿಳಿದೇ ಇದೆ. ನಾವು ಎಷ್ಟು ಸಮಯ ಮಗುವಿನೊಂದಿಗೆ ಕಳೆಯುತ್ತೀವೋ ಅಷ್ಟರ ಮಟ್ಟಿಗೆ ಮಗುವಿನ ಬೆಳವಣಿಗೆಯ ಸಕಾರಾತ್ಮಕ ಹಂತಗಳು ನಮಗೆ ಅರ್ಥವಾಗುತ್ತದೆ. ಅಂದರೆ ಮಗುವೀಣೆ ಭಾವನೆಯನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೇವೆ ಎಂದು ಅರ್ಥ. ನಾವು ಮಗುವಿನೊಂದಿಗೆ ಬೆರೆತಷ್ಟು ಸಮಯ, ಮಗುವಿನಲ್ಲಿ ಒಂದು ಸುರಕ್ಷತೆಯ ಮನೋಭಾವ ಬೆಳೆಯುತ್ತದೆ.

 

ಕಾಲ ಬದಲಾದಂತೆ ನಮ್ಮ ಜೀವನಶೈಲಿಯಲ್ಲಿ ಬದಲಾದ ಹಾಗೆ, ಮಗುವಿನ ಆಟ ನಲಿದಾಟದಲ್ಲಿ ಬದಲಾವಣೆಗಳನ್ನು ನಾವಾಗಿಯೇ ಹುಟ್ಟು ಹಾಕಿಕೊಂಡಿದ್ದೇವೆ. ಕಂಪ್ಯೂಟರ್ ಯುಗ, ಮೊಬೈಲ್ ಯುಗ ಆಗಿರುವ ಈ ಕಾಲಘಟ್ಟದಲ್ಲಿ, ಮಗುವಿಗೆ ಸ್ಟೋರಿ, ರೈಮ್ಸ್ ಅದರ ಜೊತೆಗೆ ಪ್ರಾಣಿಗಳ ಚಿತ್ರಗಳು, ಮಿದುಳಿಗೆ ಕಸರತ್ತು ನೀಡುವ ಕನ್ಸ್ಟ್ರಕ್ಷನ್ ಗೇಮ್ಗಳು ಕೂಡ ಇಂದು ಯೂಟ್ಯೂಬ್ನಲ್ಲಿ ಲಭ್ಯವಿದೆ. ಮಗು ರಚ್ಚೆ ಹಿಡಿಯಬಾರದೆಂದು ಮಗುವಿನ ಕೈಗೆ ಸ್ಮಾರ್ಟ್ ಫೋನ್ಗಳನ್ನು ಕೊಟ್ಟು ಕೂರಿಸುತ್ತೇವೆ. ಒಂದು ರೀತಿಯಲ್ಲಿ ಹೇಳುವುದಾದರೆ ಮಗುವನ್ನು ಯಂತ್ರವನ್ನಾಗಿ ಪರಿವರ್ತಿಸುತ್ತಿದ್ದೇವೆ. ಮಗುವಿನ ಬೆಳವಣಿಗೆಯ ಹಂತದಲ್ಲಿ, ದೈಹಿಕ ಬೆಳವಣಿಗೆಗೆ ಪೂರಕವಾದ ಆಟಗಳು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಸರ್ಗದ ಸಂಪರ್ಕದಲ್ಲಿ ಮರಳು, ಮಣ್ಣಿನಲ್ಲಿ ಆಟವಾಡಬೇಕಾಗಿರುವ ಮಗು ನಾಲ್ಕು ಗೋಡೆಯ ಮಧ್ಯೆ ಮೊಬೈಲ್ ಗೇಮ್ ನೋಡಿಕೊಂಡು ಸಮಯ ಕಳೆಯುತ್ತದೆ. ಪೋಷಕರಿಗೆ ಮಗುವನ್ನು ಹೊರಗಡೆ ಕರೆದುಕೊಂಡು ಹೋಗಿ ಆಟ ಆಡಿಸುವುದು ಒಂದು ರೀತಿಯಲ್ಲಿ ಹೊರೆಯಾಗಿ ಪರಿಣಮಿಸಿದೆ. ಮುಂದೆ ಇವೆಲ್ಲಾ ಮಾರ್ಪಾಟು ಮಗುವಿನ ಮೇಲೆ ಎಂಥಾ ಪರಿಣಾಮವನ್ನು ಬೀರಬಲ್ಲದು ಎಂಬುದು ಯಾರೂ ಕೂಡ ಊಹಿಸಿರುವುದಿಲ್ಲ. ಇದು ಇತ್ತೀಚಿಗಿನ ಜೀವನಶೈಲಿ. ಪೋಷಕರಿಗೆ ಸಿಗುವ ಸಮಯದಲ್ಲಿ ಕೆಲವು ಕಾಲ ಮಕ್ಕಳನ್ನು ಔಟ್ ಡೋರ್ ಗೇಮ್ಸ್ ಕಡೆಗೆ ಪ್ರೇರೇಪಿಸಿದರೆ ತುಂಬಾ ಒಳ್ಳೆಯದು.

 

ಮನೆಯ ಹೊರಗಿನ ಅಂಗಳ, ಪಾರ್ಕಿನ ಹುಲ್ಲುಹಾಸಿನ ಮೇಲೆ ಮಗುವಿನ ಜೊತೆಯಲ್ಲಿ ಚೆಂಡನ್ನು ಆಟವಾಡುತ್ತಿದ್ದರೆ , ಮಗು ಸುತ್ತಮುತ್ತಲು ಓಡಾಡುತ್ತದೆ. ಮಗು ಓಡಾಡುತ್ತಿದ್ದರೆ ನೀವು ಅದರ ಜೊತೆ ಓಡಾಡಿ. ಆಗ ಮಗು ಇನ್ನೂ ಹೆಚ್ಚು ಪ್ರೋತ್ಸಾಹದಿಂದ ದೈಹಿಕ ಕಸರತ್ತಿನ ಕಡೆಗೆ ಆಸಕ್ತಿ ವಹಿಸುತ್ತದೆ. ಮನೆಯ ಒಳಗಡೆಯೇ ನಾಲ್ಕು ಗೋಡೆಗಳ ಮಧ್ಯೆ ಮಗುವನ್ನು ಆಟವಾಡಲು ಬಿಟ್ಟರೆ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕಡಿವಾಣ ಹಾಕಿದಂತಾಗುತ್ತದೆ. ಆಫೀಸಿನ ಕೆಲಸ ಕಾರ್ಯ ಮುಗಿಸಿ ಬಂದ ತಕ್ಷಣ , ನೀವು ಮಗುವಿನೊಂದಿಗೆ ಹೊರಗಡೆ ಆಟವಾಡಲು ತೆರಳಿದರೆ ನಿಮ್ಮ ಮನಸ್ಸು ಕೂಡ ಹೊಸತನದ ಹುರುಪಿನಿಂದ ಕೂಡಿರುತ್ತದೆ. ಮಗು ಹೊರಗಡೆ ಓಡಾಡುವುದರಿಂದ ಮಗುವಿಗೆ ಸಮರ್ಪಕ ರೀತಿಯಲ್ಲಿ ರಕ್ತ ಸಂಚಾರವಾಗಿ ಮಗು ಬೆಳೆಯಲು ಸಹಕಾರಿಯಾಗುತ್ತದೆ.

 

ಹಾಗಾದರೆ ಹೊರಗಡೆ ಆಡುವ ಆಟಗಳು ಯಾವುದು ?

  • ಚೆಂಡನ್ನು ಎಸೆಯುವಾಗ ಆಟ
  • ಕಣ್ಣ ಮಚ್ಚಾಲೆ ಆಟ
  • ಕಾಗದವನ್ನು ಬಳಸಿ ವಿಮಾನ ತಯಾರುಮಾಡಿ ಹಾರಿ ಬಿಡುವುದು.
  • ತಿರುಗಾಣಿಯಾಟ
  • ಬೇಲೂನು ತುಂಬಿ ಗಾಳಿಯಲ್ಲಿ ಹಾರಿಸುವುದು
  • ಕೋಕೋ, ಚಿನ್ನಿದಾಂಡು, ಕ್ರಿಕೆಟ್, ಹಾಕಿ ಇವೇ ಮುಂತಾದ ಆಟಗಳನ್ನು ಮಗುವಿನೊಂದಿಗೆ ನೀವು ಆಡಬಹುದು.


ಇದೇ ರೀತಿಯ ಹಲವಾರು ಆಟಗಳಿವೆ. ಇದು ಮಗುವಿನ ಆರೋಗ್ಯ ಮತ್ತು ದೈಹಿಕ- ಮಾನಸಿಕ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು. ಅಷ್ಟೇ ಅಲ್ಲದೇ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ನೀವು ಜವಾಬ್ಧಾರಿಯುತ ಪೋಷಕರಾಗುತ್ತೀರಿ.

#parentinggyaan
logo

Select Language

down - arrow
Personalizing BabyChakra just for you!
This may take a moment!